ಶಂಕರಾಚಾರ್ಯರ ವಿರುದ್ದ ಅವಹೇಳಕಾರಿ ಹೇಳಿಕೆ - ವಿಪ್ರ ಸಮುದಾಯ ಖಂಡನೆ

ಶಂಕರಾಚಾರ್ಯರ ವಿರುದ್ದ ಅವಹೇಳಕಾರಿ ಹೇಳಿಕೆ - ವಿಪ್ರ ಸಮುದಾಯ ಖಂಡನೆ

ಮಧುಗಿರಿ: ಶಂಕರಾಚಾರ್ಯರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶ್ರೀ ಶಂಕರ ಸೇವಾ ಸಮಿತಿ ಹಾಗೂ ವಿಪ್ರ ಬಂಧುಗಳು ಉಪ ವಿಭಾಗಾಧಿಕಾರಿ ಕಚೇರಿಯ ಗ್ರೇಡ್-2 ಅಧಿಕಾರಿ ಶ್ರೀನಿವಾಸ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಮನವಿಯಲ್ಲಿ, ಸನಾತನ ಹಿಂದೂ ಧರ್ಮದ ಪುನರುತ್ಥಾನಕ್ಕೆ ಮಹತ್ತರ ಕೊಡುಗೆ ನೀಡಿದ ಆದಿ ಶಂಕರಾಚಾರ್ಯರು ಅದ್ವೈತ ತತ್ವವನ್ನು ಜಗತ್ತಿಗೆ ಸಾರಿದ ಶ್ರೇಷ್ಠ ಆಚಾರ್ಯರಾಗಿದ್ದು, ಇತ್ತೀಚಿನ ದಿನಗಳಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವರ ಕುರಿತು ಹಾಗೂ ಅವರ ಮಾತೃಶ್ರೀಯವರ ಚಾರಿತ್ರ್ಯದ ಬಗ್ಗೆ ಅತ್ಯಂತ ಅವಹೇಳನಕಾರಿ ಹಾಗೂ ಅಸಭ್ಯ ಭಾಷೆಯಲ್ಲಿ ಮಾತನಾಡುತ್ತಿರುವುದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಶಂಕರಾಚಾರ್ಯರು ರಚಿಸಿದ ಸೌಂದರ್ಯಲಹರಿ ಕುರಿತು ಸಹ ಕೀಳುಮಟ್ಟದ ಹೇಳಿಕೆಗಳನ್ನು ನೀಡಲಾಗಿದ್ದು, ಇಂತಹ ಹೇಳಿಕೆಗಳಿಂದ ಶೃಂಗೇರಿ ಶಾರದಾ ಪೀಠ ಸೇರಿದಂತೆ ಆದಿ ಶಂಕರಾಚಾರ್ಯರ ಅನುಯಾಯಿಗಳ ಮನಸ್ಸಿಗೆ ತೀವ್ರ ನೋವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಅವಹೇಳನಕಾರಿ ಹೇಳಿಕೆಗಳಿರುವ ವಿಡಿಯೊ ದಾಖಲೆಯನ್ನು (ಸಿ.ಡಿ.) ಮನವಿಯೊಂದಿಗೆ ಲಗತ್ತಿಸಲಾಗಿದ್ದು, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಹಾಗೂ ವಿವೇಕ್ ಸೂರ್ಯ ಎಂಬುವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮುಂದಿನ ದಿನಗಳಲ್ಲಿ ಯಾವುದೇ ಧರ್ಮಗುರುಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಕಾನೂನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಸಮಿತಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಶ್ರೀ ಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ, ಗೌರವಾಧ್ಯಕ್ಷ ಸೂರ್ಯನಾರಾಯಣರಾವ್, ಕಾರ್ಯದರ್ಶಿ ಶಕುಂತಲಾ ಗುಂಡೂರಾವ್, ವೇದಬ್ರಹ್ಮ ಶ್ರೀ ಕೆ. ನಾಗರಾಜ ಶಾಸ್ತ್ರಿಗಳು, ಕೆ. ನಾರಾಯಣ್, ಹೆಚ್.ಟಿ. ಸಂಜೀವಮೂರ್ತಿ, ಎಂ.ಎನ್. ನಾಗಭೂಷಣ್, ಎಂ.ಎಸ್. ಬದ್ರಿನಾಥ್, ಜಿ.ಎನ್. ರಾಘವೇಂದ್ರ, ಭೀಮೇಶ್, ಕೆ. ನಾಗರಾಜ್, ಶ್ರೀನಿವಾಸ್ ಶಾಸ್ತ್ರಿ, ಎಲೆಕ್ಷನ್ ರಂಗನಾಥ್, ಎಚ್.ವಿ. ಮಂಜುನಾಥ್, ಪಿ.ವಿ. ಬಾಲಕೃಷ್ಣ, ಜಿ. ವೆಂಕಟೇಶ್, ಸತೀಶ್ ಎಂ.ಪಿ., ನಟರಾಜ್ ದೀಕ್ಷಿತ್, ಲಕ್ಷ್ಮಿಕಾಂತ ರಾವ್, ಸುನಿಲ್, ರಮ್ಯಾ, ಸರಸ್ವತಿ, ಸಂಧ್ಯಾ, ಶೋಭಾ, ಪದ್ಮ, ಮುರಳಿ, ಶಾರದಮ್ಮ, ಜೋಡಿದಾರ್ ಮುರುಳಿಧರ್, ನಾರಾಯಣ ಚಾರ್ಲು, ಲಕ್ಷ್ಮಿಕಾಂತ್, ಉಷಾದೇವಿ, ರಮೇಶ್, ಪಿ.ವಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು